ಪ್ರಾಜ್ಞಾನ ಪರೀಕ್ಷಣ

ಯಾವುದೇ ಸಂಗತಿ ಅಥವಾ ಘಟನೆಗಳು ನಡೆಯುವ ಮೊದಲೆ ಅವನ್ನು ತಿಳಿಯುವುದು. ಇದನ್ನು ನಿರ್ಧರಿಸಲು ಬಳಸುವ ಸಾಧನವೇ ಪ್ರಾಜ್ಞಾನ ಪರೀಕ್ಷಣ (ಪ್ರಾಗ್ನಾಸ್ಟಿಕ್ ಟೆಸ್ಟ್). ವಿದ್ಯಾರ್ಥಿ ಮುಂದೆ ಯಾವ ಕ್ಷೇತ್ರದಲ್ಲಿ ಎಷ್ಟರಮಟ್ಟಿನ ಯಶಸ್ಸು ಸಾಧಿಸಬಲ್ಲ ಎಂಬುದನ್ನು ಮೊದಲೇ ನಿರ್ಧರಿಸುವುದರಿಂದ ಅವನಿಗೆ ಯುಕ್ತರೀತಿಯ ಶೈಕ್ಷಣಿಕ ಮಾರ್ಗದರ್ಶನ ನೀಡಲು ನೆರವಾಗುತ್ತದೆ.

	ಪ್ರಾಜ್ಞಾನ ವೈಜ್ಞಾನಿಕ ಕ್ರಿಯೆ. ಕೇವಲ ಮೇಲ್ನೋಟದಿಂದ ಯಾವ ಮುನ್ಸೂಚನೆಯೂ ಇದರಿಂದ ದೊರಕದು. ಆದ್ದರಿಂದ ಈ ಕ್ರಿಯೆಯನ್ನು ಶಾಸ್ತ್ರೀಯ ರೀತಿಯಲ್ಲಿ ನಡೆಸಬೇಕು. ಈ ಕಾರ್ಯದಲ್ಲಿ ಮೂರು ಅಂಶಗಳಿವೆ. 1 ಯುಕ್ತರೀತಿಯ ಅಳತೆಯ ಸಾಧನ ನಿರ್ಮಾಣವಾಗಬೇಕು. 2 ಸಾಧನವನ್ನು ಬಳಸಿಕೊಂಡು ಯುಕ್ತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ನಡೆಸಬೇಕು. 3 ಫಲಿತಾಂಶವನ್ನು ಬಲು ಎಚ್ಚರಿಕೆಯಿಂದ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು.

	ಈ ಕಾರ್ಯಕ್ಕೆ ಬಳಸುವ ಸಾಧನ ವಸ್ತುನಿಷ್ಠ ರೂಪದ ಒಂದು ನೂತನ ಪರೀಕ್ಷಣ ವಿಧಾನ. ಇದರಲ್ಲಿ ವಿದ್ಯಾರ್ಥಿಯ ಅಭಿರುಚಿ, ಯೋಗ್ಯತೆ ಮತ್ತು ಆಸಕ್ತಿಗಳನ್ನು ನಿರ್ಧರಿಸಬಲ್ಲ ಪ್ರಶ್ನಾಂಶಗಳು ಸೇರಿರುತ್ತವೆ. ಯಾವುದೇ ಪ್ರಾಜ್ಞಾನ ಪರೀಕ್ಷಣಕ್ಕೆ ಇರಬೇಕಾದ ಗುಣಗಳೆಂದರೆ 1 ಮುನ್ಸೂಚಿಸುವುದರಲ್ಲಿ ನಿಖರತೆ, 2 ಅದರ ಬಗ್ಗೆ ಸಂಗ್ರಹಿಸಿದ ದತ್ತಾಂಶಗಳ ಮೌಲ್ಯಮಾಪನ, 3 ಅದಕ್ಕೆ ಬೇಕಾದ ಮೂಲ ಅನ್ವೇಷಣಾ ಪದ್ಧತಿಯ ಆಯ್ಕೆ. ಈ ಅಂಶಗಳಿಗೆಲ್ಲ ಪರೀಕ್ಷಕರು ಗಮನ ಕೊಡಬೇಕಾಗುತ್ತದೆ. ಶಿಕ್ಷಣ ಸಾರ್ವತ್ರಿಕವಾಗಿರುವಾಗ ಪ್ರತಿ ವ್ಯಕ್ತಿಗೂ ಜೈವಿಕವಾಗಿ ಭಿನ್ನರೀತಿಯ ಅಭಿರುಚಿ ಆಸಕ್ತಿಗಳು, ಶಕ್ತಿಸಾಮಥ್ರ್ಯಗಳು ಲಭ್ಯವಾಗಿರುವುದರಿಂದ ಎಲ್ಲರಿಗೂ ಒಂದೇ ಬಗೆಯ ಶಿಕ್ಷಣ ಕೊಡುವುದು ಸಮಾಜದ ಹಿತದೃಷ್ಟಿಯಿಂದ ವಿಹಿತವೆನಿಸಲಾರದು. ಆದ್ದರಿಂದ ಅವರವರಿಗೆ ಒಪ್ಪುವ ಶಿಕ್ಷಣಕ್ಷೇತ್ರದಲ್ಲಿ ವ್ಯಕ್ತಿಗಳನ್ನು ತೊಡಗಿಸುವುದು ಅಗತ್ಯವಾಗುತ್ತದೆ. ಅಂಥ ಕ್ಷೇತ್ರವನ್ನು ನಿರ್ಧರಿಸುವಾಗ ಎಚ್ಚರಿಕೆಯ ಮಾರ್ಗದರ್ಶನ ಅಗತ್ಯ. ಆ ಕಾರ್ಯದಲ್ಲಿ ಅಂದಾಜಿನ ಮೇಲೆ ಸಲಹೆ ನೀಡುವುದರ ಬದಲು ಪ್ರಾಜ್ಞಾನ ಪರೀಕ್ಷಣಗಳನ್ನು ಬಳಸಿಕೊಂಡು ಶಾಸ್ತ್ರೀಯ ರೀತಿಯಲ್ಲಿ ಅವರ ಮುಂದಿನ ದಾರಿಯನ್ನು ನಿರ್ಧರಿಸಿಕೊಂಡು ಸಲಹೆ ಮಾಡಬೇಕು. ಅದರಿಂದ ವ್ಯಕ್ತಿಗೂ ಅನುಕೂಲ, ಸಮಾಜಕ್ಕೂ ಅನುಕೂಲ.										     (ಟಿ.ಜಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ